ಅಡಕೆಯಲ್ಲಿ ಔಷಧೀಯ ಗುಣ; ಸುಪ್ರೀಂಗೆ ಶೀಘ್ರ ವರದಿ

ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಅಡಕೆ ಬೆಳೆಗಾಗರರು ಆತಂಕಪಡುವ ...
ಡಿವಿ ಸದಾನಂದ ಗೌಡ
ಡಿವಿ ಸದಾನಂದ ಗೌಡ

ಮಂಗಳೂರು:  ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಅಡಕೆ ಬೆಳೆಗಾಗರರು ಆತಂಕಪಡುವ  ಅಗತ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಅಡಕೆಯಲ್ಲಿ ಔಷಧೀಯ ಅಂಶಗಳೂ ಇವೆ . ಈ ಬಗ್ಗೆ ಚೆನ್ನೈನ ವೈದ್ಯಕೀಯ ಕಾಲೇಜಿನ ಸಂಶೋಧನಾ ಸಂಸ್ಥೆಯಿಂದ ಸಿಕ್ಕಿರುವ ಸಂಶೋಧನಾ ಪ್ರಬಂಧಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಸಿ ತಜ್ಞರಿಂದ  ವರದಿ ಪಡೆದುಕೊಳ್ಳಬೇಕಿದೆ. ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಈಗಾಗಲೇ  ಪಕ್ಷದ ಸಂಸದರ ನಿಯೋಗದ ಜತೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು.

ಕಸ್ತೂರಿ ರಂಗನ್ ವರದಿಯಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ಆಗುತ್ತದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಉಪಗ್ರಹದ ಅಂಕಿ ಅಂಶಗಳ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದ್ದು, ವಾಸ್ತವ  ಅಂಶಗಳಿಗೂ ಉಪಗ್ರಹ ಆಧಾರದ ಸಮೀಕ್ಷೆಗೂ ಕೊಂಚ ವ್ಯತ್ಯಾಸ ಇದೆ ಎಂಬುದನ್ನು ಹಸಿರು ಪೀಠವೇ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಆಯಾ ಪ್ರದೇಶಗಳಿಗೆ ತೆರಳಿ ಅರಣ್ಯ, ಕೃಷಿ, ವಾಸ್ತವ್ಯದ ಕುರಿತು  ಗ್ರಾಮ ಮಟ್ಟದಿಂದಲೇ ಕೂಲಂಕಷ ಅಧ್ಯಯನ ನಡೆಸಬೇಕು  ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಎಚ್ಚೆತ್ತುಕೊಂಡಿಲ್ಲ. ಮತ್ತೊಮ್ಮೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದ ಬಳಿಕ ತರಾತುರಿಯಲ್ಲಿ ಅಲ್ಲಲ್ಲಿ ಸಭೆ ನಡೆಸುವ ಪ್ರಯತ್ನ ನಡೆಸಿದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ  ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ತೊಂದರೆ ಆಗಲಿದ್ದು , ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು . ಗ್ರಾಮಮಟ್ಟದಲ್ಲಿ  ತೊಂದರೆಗೆ ಒಳಗಾಗುವವರ ಬಗ್ಗೆ ಸಮಗ್ರ ವರದಿ ನೀಡಬೇಕು. ಇಲ್ಲದೆ ಇದ್ದರೆ ಆ ಭಾಗದಲ್ಲಿ ವಾಸವಾಗಿರುವವರಿಗೆ ತೊಂದರೆ ಆಗಲಿದೆ ಎಂದು ಆಗ್ರಹಿಸಿದರು.

ಪ್ರಸ್ತಾವ ಬಂದಿಲ್ಲ: ಸುಪ್ರೀಂಕೋರ್ಟ್ ಆದೇಶದಂತೆ ಕಂಬಳ ನಿಷೇಧಿಸಿರುವುದನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಇದುವರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಡೀವಿ ಹೇಳಿದರು.

ತಮ್ಮ ನಿವಾಸದಲ್ಲಿ ಜಿಲ್ಲಾ ಕಂಬಳ ಸಮಿತಿ ನೀಡಿದ ಮನವಿ ಸ್ವೀಕರಿಸಿದ ಬಳಿಕ  ಮಾತನಾಡಿದ ಅವರು, ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಕ್ಕೆ ಸೀಮಿತವಾದ ಈ ಕ್ರೀಡೆಯನ್ನು  ನಿಷೇಧಿಸಿರುವ ಬಗ್ಗೆ  ಪುನರ್ ಪರಿಶೀಲಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಅಧಿಕಾರಿಗಳೂ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ರಾಜ್ಯದ ಬೊಕ್ಕಸದಿಂದ ಕ್ರೀಡಿಗೆ ಸಹಾಯ ಧನವನ್ನೂ ನೀಡುತ್ತಿದ್ದುದರಿಂದ ಇದನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಸಂಪುಟದಲ್ಲಿ ತೀರ್ಮಾನವ ಕೈಗೊಳ್ಳಬೇಕಿತ್ತು ಎಂದರು.

ಪ್ರಸ್ತುತ ಇರುವ ಕಂಬಳದ ರೂಪುರೇಷೆಯಲ್ಲಿ ಸ್ವಲ್ಪ ತಿದ್ದುಪಡಿ ತಂದು ಕ್ರೀಡೆಯನ್ನು ಉಳಿಸುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜತೆಗೆ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಯತ್ನ ನಡೆಸಲಾಗುವುದು. ಕಾನೂನು ಅಭಿಪ್ರಾಯ  ಪಡೆದುಕೊಂಡು ಮುಂದುವರಿಯಲಾಗುವುದು . ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಜನಪದ ಕ್ರೀಡೆಯನ್ನು ಏಕಾಏಕಿ ನಿಲ್ಲಿಸುವುದು ಸೂಕ್ತವಲ್ಲ . ಸ್ವಲ್ಪ ಬದಲಾವಣೆ ಮಾಡಿ ಅಹಿಂಸಾ ರೀತಿಯಲ್ಲಿ ಮುಂದುವರಿಸುವ ಕೆಲಸ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com